ವಿಶ್ವನಾಥ್, ಜಿ ಆರ್
 	1949-. ಭಾರತದ ಕ್ರಿಕೆಟ್ ಆಟಗಾರ. ಸುಪ್ರಸಿದ್ಧ ಬ್ಯಾಟುಗಾರರಲ್ಲೊಬ್ಬರು. 1949 ಫೆಬ್ರವರಿ 12ರಂದು ಭದ್ರಾವತಿಯಲ್ಲಿ ಜನಿಸಿದರು.

	ಬೆಂಗಳೂರಿನ ಕೋಟೆ ಹೈಸ್ಕೂಲಿನಲ್ಲಿ ವಿದ್ಯಾರ್ಥಿ ಯಾಗಿದ್ದಾಗಲೇ, ತಮ್ಮ ಹದಿನಾಲ್ಕನೆಯ ವಯಸ್ಸಿ ನಲ್ಲಿ, ಕ್ರಿಕೆಟ್ ಆಟದಲ್ಲಿ ಆಸಕ್ತಿ ತಳೆದ ಇವರು 1967ರಲ್ಲಿ ಕರ್ನಾಟಕ ಆಂಧ್ರ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ ಮೊದಲ ಬಾರಿಗೆ ಆಡಿ, 214 ರನ್ನುಗಳನ್ನು ಪಡೆದು, ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುವ ಮೂಲಕ ಕ್ರಿಕೆಟ್ ರಂಗವನ್ನು ಪ್ರವೇಶಿಸಿದರು. ಅನಂತರ 1969ರಲ್ಲಿ ಕಾನ್ಪುರದಲ್ಲಿ ಭಾರತ ಮತ್ತು ಆಸ್ಟ್ರೇಲಿಯಗಳ ನಡುವೆ ನಡೆದ ಟೆಸ್ಟ್, ಇವರು ಭಾಗವಹಿಸಿದ ಪ್ರಥಮ ಟೆಸ್ಟ್ ಪಂದ್ಯ. ಆಗ 137 ರನ್ನು ಪಡೆದು ಪ್ರಥಮ ಟೆಸ್ಟಿನಲ್ಲಿಯೇ ಶತಕ ಬಾರಿಸಿ, ಉತ್ತಮ ಬ್ಯಾಟುಗಾರ ಎಂದು ಆಯ್ಕೆ ಸಮಿತಿಯ ಗಮನ ಸೆಳೆದರು; ಅಖಿಲ ಭಾರತ ಮಟ್ಟದ ಕ್ರಿಕೆಟ್ ಆಟಗಾರರೆಂದು ಹೆಸರು ಗಳಿಸಿದರು. ಆಡಿದ ಮೊದಲನೆಯ ಟೆಸ್ಟ್‍ನಲ್ಲಿಯೇ ಶತಕ ಬಾರಿಸಿದ ಭಾರತೀಯ ಕ್ರಿಕೆಟ್ ಆಟಗಾರರಲ್ಲಿ ಇವರು ಆರನೆಯವರು. ಅಲ್ಲದೆ, ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿ, ಅನಂತರದ ಟೆಸ್ಟ್ ಪಂದ್ಯದಲ್ಲಿ ಮತ್ತೆ ಶತಕ ರನ್ನುಗಳನ್ನು ಪಡೆದ ಭಾರತೀಯ ಆಟಗಾರ ರಲ್ಲೇ ಇವರು ಮೊದಲಿಗರು (ಈ ದಾಖಲೆ ಸ್ಥಾಪಿಸಿದ್ದು 1973 ಫೆಬ್ರವರಿ 7ರಂದು ಮುಂಬಯಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟಿನಲ್ಲಿ).

	ದೇಶವಿದೇಶಗಳಲ್ಲಿ ಲಿಟ್ಲ್ ಮಾಸ್ಟರ್ ಎಂದು ಖ್ಯಾತರಾಗಿದ್ದ ಇವರದು ಆಕರ್ಷಕ ಬ್ಯಾಟಿಂಗ್. ಅದರಲ್ಲಿಯೂ ಸ್ಕ್ವೇರ್ ಕಟ್ ಇವರ ಆಟದ ವೈಶಿಷ್ಟ್ಯ. ಇಲ್ಲಿಯವರೆಗೆ ಇವರು 31ಕ್ಕೂ ಹೆಚ್ಚು ಟೆಸ್ಟ್‍ಗಳಲ್ಲಿ ಆಡಿ 1500ಕ್ಕೂ ಹೆಚ್ಚು ರನ್ನುಗಳನ್ನು ಗಳಿಸಿದ್ದಾರೆ. ಜೊತೆಗೆ ಇವರು ಉತ್ತಮ ಫೀಲ್ಡರ್ ಕೂಡ. ಇದುವರೆಗೆ ಸುಮಾರು 70ಕ್ಕೂ ಹೆಚ್ಚು ಕ್ಯಾಚುಗಳನ್ನು ಹಿಡಿದಿದ್ದಾರೆ. ಮೆಲ್ಬರ್ನ್‍ನಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಮೂರನೆಯ ಟೆಸ್ಟ್‍ನಲ್ಲಿ (1978) ಭಾರತ ಪ್ರಥಮವಾಗಿ ಆಸ್ಟ್ರೇಲಿಯದಲ್ಲೆ ಯಶಸ್ಸು ಪಡೆಯಿತು. ಈ ಟೆಸ್ಟಿನಲ್ಲಿ ಇವರು ಪ್ರಥಮ ಇನ್ನಿಂಗ್ಸ್‍ನಲ್ಲಿ 59 ರನ್ನುಗಳನ್ನೂ ದ್ವಿತೀಯ ಇನ್ನಿಂಗ್ಸ್‍ನಲ್ಲಿ 54 ರನ್ನುಗಳನ್ನೂ ಪಡೆದು ಭಾರತದ ಐತಿಹಾಸಿಕ ಹಾಗೂ ಅಪೂರ್ವ ಯಶಸ್ಸಿಗೂ ಕಾರಣರಾದರು.

	1971ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.		
	(ಎಸ್.ಎಚ್.ಕೆ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ